ಭಗವಾನ್ ಶ್ರೀ ಸದ್ಗುರು ನಿತ್ಯಾನಂದ ಗುರುದೇವರ ಸಂಕ್ಷಿಪ್ತ ಚರಿತ್ರೆ

1905-1906ನೇ ಇಸವಿಯಲ್ಲಿ ಕೇರಳ ರಾಜ್ಯದಲ್ಲಿ ಈ ಅತ್ಯಪೂರ್ವವಾದ ಮಗುವಿನ ಜನನವಾಯಿತು. ಯೋಗಿಗಗಳ ಹುಟ್ಟು ಯಾರಿಗೂ ತಿಳಿದಿರುವುದಿಲ್ಲ ಎಂಬಂತೆ ಈ ಮಗುವಿನ ತಂದೆ-ತಾಯಿ ಯಾರು ಎಂದು ಯಾರಿಗೂ ತಿಳಿದಿಲ್ಲ.

ಅವತಾರ ಪುರುಷರ ಬದುಕೇ ವಿಸ್ಮಯದಿಂದ ಕೂಡಿರುತ್ತದೆ. ಅವರ ಜನ್ಮ-ಜೀವನ-ಅಂತ್ಯ ನಿಗೂಢ. ಕೇರಳದ ಕಲ್ಲಿಕೋಟೆ ಜಿಲ್ಲೆಯ ತುನೇರಿ ಗ್ರಾಮದ ಕೂಲಿ ಕಾರ್ಮಿಕರಾದ ಚಾತಯನಾಯರ್ ಹಾಗೂ ಉನ್ನಿ ಅಮ್ಮ ಎಂಬವರಿಗೆ ಸ್ವಪ್ನದಲ್ಲಿ ಕಂಡಂತೆ ಆರೀ ಅಯ್ಯಪ್ಪಸ್ವಾಮಿಯ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಈ ದಿವ್ಯ ಶಿಶುವು ಸಿಕ್ಕಿತು. ಅನಾಥ ಮಗುವನ್ನು ಕೈಗೆತ್ತಿಕೊಂಡರು. ಮುಂದೆ ಈ ಅನಾಥ ಮಗುವಿನ ಪಾಲನೆ-ಪೋಷಣೆಯನ್ನು ಕೈಗೆತ್ತಿಕೊಂಡವರು. ಕೇರಳದ ಕೋಜಿಕ್ಕೋಡ್ ಜಿಲ್ಲೆಯ ಸುಪ್ರಸಿದ್ಧ ವಕೀಲ ಈಶ್ವರ ಅಯ್ಯರ್ ಎಂಬ ಬ್ರಾಹ್ಮಣರು ಈ ಮಗುವಿಗೆ ರಾಮನ್ ಎಂಬ ಹೆಸರಿಟ್ಟರು. ಭಗವದ್ ಭಕ್ತರಾದ ವಕೀಲ ಈಶ್ವರ ಅಯ್ಯರ್‌ರವರು ಸೂರ್ಯ ದೇವರ ಆರಾಧಕರಾಗಿದ್ದರು.

ಸಾಕುಮಗನಾದ ರಾಮನ್ ಒಂದು ದಿನ ಅಯ್ಯರ್‌ರವರಿಗೆ ಸಾಕ್ಷಾತ್‌ಸೂರ್ಯನಾರಾಯಣನಾಗಿ ದರ್ಶನ ನೀಡಿ ದಿವ್ಯ ಆನಂದ ಪ್ರಾಪ್ತಿ ಮಾಡಿದಾಗ, ಪರಮ ಆನಂದ ಭರಿತರಾದ ಅಯ್ಯರ್‌ರವರು ನನಗೆ ನಿತ್ಯ ಆನಂದವನ್ನು ನೀಡಿದ ನೀನು ’ನಿತ್ಯಾನಂದ’ಎಂದು ಭಾವಪರವಶರಾಗಿ ನುಡಿದರು. ಅಂದಿನಿಂದ ಎಲ್ಲರೂ ರಾಮನ್‌ನನ್ನು ನಿತ್ಯಾನಂದ ಎಂದು ಕರೆಯಲಾರಂಭಿಸಿದರು.

ಕೇರಳದಲ್ಲಿ ಸಹಸ್ರಾರು ಪವಾಡ, ಲೀಲೆಗಳನ್ನು ಮಾಡಿ ಭಕ್ತರನೇಕರನ್ನು ಉದ್ಧರಿಸಿ, ನಾಸ್ತಿಕರಿಗೆ ಹುಚ್ಚರಂತೆ ಕಂಡು, ಕೇವಲ ಲಂಗೋಟಿಯಲ್ಲಿ ಕೇರಳದ ಕಾಂಙಂಗಾಡ್, ಕರ್ನಾಟಕ, ಬಂಗಾಳ,ಬರ್ಮಾ, ಮಲಯಾ, ಶ್ರೀಲಂಕಾ, ಹಿಮಾಲಯ ಮುಂತಾದ ಕಡೆಗಳಲ್ಲಿ ನಡೆಸಿದ ಲೀಲೆ ಮತ್ತು ಮಾನವತಾ ಸೇವೆಗಳು ಈಗ ಇತಿಹಾಸದ ಪುಟದಲ್ಲಿವೆ. ಇವರು ಕಾಂಙಂಗಾಡ್, ಕಾಸರಗೋಡು , ಕುಂಬಳೆ, ಕಾಪು, ಪಡುಬಿದ್ರೆ, ಸುರತ್ಕಲ್, ಗೋಕರ್ಣ, ಪಳನಿ , ಮಂಜೇಶ್ವರ, ಪಾವಂಜೆ ನದಿ, ಮಂಗಳೂರು ಮೊದಲಾದೆಡೆ ಸಂಚರಿಸಿ ಪವಾಡ ನಡೆಸಿದ್ದರು ಎಂಬ ಉಲ್ಲೇಖ ಇದೆ. ಇವರು ಉಡುಪಿ, ಕೊಲ್ಲೂರಿಗೆ ಬಂದದ್ದು ಸಾಧಾರಣ 1920-30ರ ದಶಕದಲ್ಲಿ. ಕೊನೆಯಲ್ಲಿ ಮುಂಬಯಿಯ ಠಾಣಾ ಜಿಲ್ಲೆಯ ಗಣೇಶಪುರಿಯಲ್ಲಿ ಸುಮಾರು 25 ವರ್ಷಗಳು ನೆಲೆ ನಿಂತು ಅಲ್ಲಿ ಬಿಸಿನೀರಿನ ಕುಂಡ, ಆಶ್ರಮ, ಶಾಲೆ ,ಆಸ್ಪತ್ರೆ ,ಮಂದಿರ, ರಸ್ತೆಗಳನ್ನು ಕಟ್ಟಿಸಿ ಅಭಿವೃದ್ಧಿ ಪಡಿಸಿ ಸಹಸ್ರ-ಸಹಸ್ರ ಭಕ್ತರನ್ನು ಉದ್ಧರಿಸಿ 8-8-1961ರಲ್ಲಿ ಬ್ರಹ್ಮೈಕ್ಯವಾಗಿರುತ್ತಾರೆ(ಮಹಾ ಸಮಾಧಿ)

ಶ್ರೀ ಸದ್ಗುರು ನಿತ್ಯಾನಂದ ಗುರುದೇವ

ಇತರ ಮಾಹಿತಿಗಳು