ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಕೊಲ್ಲೂರು.

ಸದ್ಗುರು ನಿತ್ಯಾನಂದರ ನೇರ ಶಿಷ್ಯರಾದ, ಶ್ರೀ ವಿಮಲಾನಂದ ಸ್ವಾಮೀಜಿಯವರು ಕೊಲ್ಲೂರು ಶ್ರೀ ಸದ್ಗುರು ನಿತ್ಯಾನಂದ ಮಠದ ಸಂಸ್ಥಾಪಕರು. ಪವಾಡ ಪುರುಷ ಶ್ರೀ ನಿತ್ಯಾನಂದರ ಲೋಕ ಕಲ್ಯಾಣದ ಸಂದೇಶವನ್ನು ಸಾರುತ್ತಾ, ಕೊಲ್ಲೂರು ಶ್ರೀ ಮೂಕಾಂಬಿಕೆಯ ಕ್ಷೇತ್ರದಲ್ಲಿ ಸೇವಾ ಕಾರ್ಯವನ್ನು ಮುಂದುವರಿಸಿಕೊಂಡು ಬಂದವರು.

ಶ್ರೀ ಗುರುದೇವರ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ್ದ ಶ್ರೀ ವಿಮಲಾನಂದ ಸ್ವಾಮೀಜಿಯವರು, 1960ರಲ್ಲಿ ಕೊಲ್ಲೂರಿಗೆ ಬಂದು ಕುಟೀರವನ್ನು ಕಟ್ಟಿ ವಾಸಿಸುತ್ತಿದ್ದರು. ಅದೇ ಕುಟೀರವು ಇಂದು ಶ್ರೀ ಗುರುದೇವತಾನುಗ್ರಹದಿಂದ ಹಾಗೂ ಭಕ್ತಾಧಿಗಳ ಸಹಕಾರದಿಂದ ಶಿಲಾಮಯ ದೇವಾಲಯವಾಗಿ ಮಾರ್ಪಟ್ಟಿದ್ದೆ. ಶ್ರೀ ಗುರುದೇವರ ವಿಗ್ರಹ ಪಂಚಲೋಹದಿಂದ ನಿರ್ಮಿಸಲಾಗಿದೆ. ಇಲ್ಲಿ ಪ್ರತಿ ವರ್ಷವೂ ಎಪ್ರಿಲ್ ತಿಂಗಳ ಚೈತ್ರ ಪೂರ್ಣಮಿಯಂದು ವಾರ್ಷಿಕೋತ್ಸವ, ಅನ್ನದಾನ ನಡೆಯುತ್ತದೆ. ಪ್ರತಿದಿನ ತ್ರಿಕಾಲ ಪೂಜೆ, ಪಾದುಕ ಅಭಿಷೇಕ ನಡೆಯುತ್ತಿದೆ. ಅತಿಥಿಯಾಗಿ ಬರುವ ಸಾಧುಸಂತರಿಗೆ ಭೋಜನ ವ್ಯವಸ್ಥೆಯನ್ನೂ, ಉಳಿಯಲು ವ್ಯವಸ್ಥೆಯನ್ನೂ ಮಾಡಿ ಕೈಲಾದ ಸಹಾಯ ಮಾಡಲಾಗುತ್ತಿದೆ.

ಶ್ರೀ ವಿಮಲಾನಂದ ಸ್ವಾಮೀಜಿಯವರು ಶ್ರೀ ನಿತ್ಯಾನಂದ ಗುರುದೆವರ ಪುಣ್ಯತಿಥಿ ಯನ್ನು ಎಂದೂ ಆಚರಿಸುವುದಿಲ್ಲ. ನನ್ನ ಗುರುದೇವರು ಸಮಾಧಿ ಆಗಲಿಲ್ಲ, ನನಗೆ ಅವರು ಇನ್ನೂ ಮೊದಲಿನ ಹಾಗೆ ಇದ್ದಾರೆ. ಆದುದರಿಂದ ನಾನು ಪುಣ್ಯತಿಥಿ ಆಚರಿಸುವುದಿಲ್ಲಎಂದು ಹೇಳುತ್ತಾರೆ. ಶ್ರೀ ವಿಮಲಾನಂದ ಸ್ವಾಮೀಜಿಯವರು ಶ್ರೀ ನಿತ್ಯಾನಂದರ ನೇರ ಶಿಷ್ಯರಾಗಿದ್ದರೂ ಎಂದು ಹೇಳಿಕೊಂಡವರಲ್ಲ.

ಶ್ರೀ ನಿತ್ಯಾನಂದ ಗುರುದೇವರು ಯಾವುದೆ ಜಾತಿ, ಮತ, ಪಂಗಡಗಳಿಗೆ ಸೇರಿದವರಲ್ಲ. ಎಲ್ಲರೂ ಒಂದೇ, ಎಲ್ಲರೂ ಸಮಾನರು ಎಂದು ಲೋಕಕ್ಕೆ ಸಾರಿದವರು. ಆದುದರಿಂದ ಈ ಮಠದಲ್ಲಿ ಯಾವುದೇ ಜಾತಿ, ಧರ್ಮ, ಮತ, ಪಂಗಡಗಳ ಭೇದವಿರುವುದಿಲ್ಲ. ಶ್ರೀ ಗುರುದೇವರನ್ನು ಎಲ್ಲಾ ಜಾತಿ-ಮತದವರು ಭಕ್ತಿ ಶೃದ್ಧೆಯಿಂದ ಆರಾಧಿಸುತ್ತಾರೆ.
ಶ್ರೀ ಗುರುದೇವರ ನೇರ ಶಿಷ್ಯರಲ್ಲಿ ಓರ್ವರಾಗಿದ್ದ ಶ್ರೀ ವಿಮಲಾನಂದ ಸ್ವಾಮೀಜಿಯವರು 02 ಜೂನ್ 2014 ರಂದು ಮಧ್ಯಾಹ್ನ 12:30ಕ್ಕೆ ಶ್ರೀ ಗುರುದೇವರ ಮಹಾ ಮಂಗಳಾರತಿ ಆಗುತ್ತಿರುವಾಗಲೇ ಬ್ರಹ್ಮೈಕ್ಯರಾದರು. ಸಮಾಧಿ ಆಗುವ ಮೊದಲು ತನ್ನ ಹತ್ತಿರವಿದ್ದ ಎಲ್ಲಾ ಭಕ್ತರಿಗೂ ತಾನು ದೇಹ ಬಿಡುವ ಮುನ್ಸೂಚನೆಯನ್ನು ಕೊಟ್ಟಿದ್ದರು. ಶ್ರೀ ವಿಮಲಾನಂದರ ಸಮಾಧಿಯನ್ನೂ ಕೊಲ್ಲೂರಿನ ಶ್ರೀ ಗುರುದೇವರ ಮಠದ ಪಕ್ಕದಲ್ಲಿಯೇ ಮಾಡಲಾಗಿದೆ. (ಸಮಾಧಿಯು ಶ್ರೀ ಮೂಕಾಂಬಿಕಾ ದೇವಸ್ಥಾನದ ಅರ್ಧ ಕಿಲೋಮೀಟರ್ ದೂರದಲ್ಲಿ, ಸ್ವಾಮೀಜಿಯವರು 56 ವರ್ಷಗಳಿಂದ ನೆಲೆಸಿದ್ದ ಶ್ರೀ ಗುರುದೇವರ ಮಠದ ಪಕ್ಕದಲ್ಲಿಯೇ ಮಾಡಲಾಗಿದೆ)

ಶ್ರೀ ಸದ್ಗುರು ನಿತ್ಯಾನಂದ ಆಶ್ರಮ

ಇತರ ಮಾಹಿತಿಗಳು